ಹೇಳಿ ಹೋಗು ಕಾರಣ !

ಹೇಳಿ ಹೋಗು ಕಾರಣ !

ಕವೆದ ಕಾರ್ಮೋಡಗಳಿಗೆ ಕತ್ತಲಿನ ಮೋಹ !
ಕಡಲ ಸಿಡಿಲಿಗೆ ಅಲೆಗಳ ಸೋಕುವ ಮೋಹ !
ಗೆಜ್ಜೆಗಳಿಗೆ ಕ೦ಡ ಲಜ್ಜೆಯ ಮೋಹ !
ಸತ್ತ ಕಾಲುವೆಗೆ ಇಬ್ಬನಿಯ ಮೋಹ !
ಕಾರಣಗಳಿಲ್ಲ…ಮೋಹವಿದೆ.
‘ಎಲ್ ಹೋಗ್ತಿದ್ಯ ? ಹೇಳ್ಬಿಟ್ ಹೋಗು !’
ಇದನ್ನು ಸಾಮಾನ್ಯವಾಗಿ ಎಲ್ಲರೂ ಕೇಳಿದ್ದೀವಿ,ಅಲ್ವ? ಕೆಲವೊಮ್ಮೆ ಕಾರಣಗಳನ್ನು ಹುಡುಕಿ ಹೋಗಿದ್ದೇವೆ,ಕೆಲವೊಮ್ಮೆ ಕಾರಣಗಳಿ೦ದ ಹೋಗಿದ್ದೇವೆ.ಆ ಕವಲಿನ ಹಾದಿಗಳಲ್ಲಿ ಕ೦ಬನಿಯು ಹೆಪ್ಪುಗಟ್ಟಿದ್ದವಾ?ನಗುವ ಬಿ೦ಕವು ನಮಗಾಗಿಯೇ ಕಾದಿದ್ದವಾ?
ಪ್ರತಿ ಹೆಜ್ಜೆಗೂ ಸಿಕ್ಕವರೆಷ್ಟೋ?ಕೇಳಿಸಿದ ದನಿಗಳೆಷ್ಟೋ?ಕಳಚಿದ ಮುಖವಾಡಗಳೆಷ್ಟೋ?
ಆ ಹಾದಿಗಳು ಮು೦ಚೆಯೇ ನಮ್ಮಲ್ಲಿ ಅಚ್ಚಾಗಿಹುದಾ?ನಾವು ಸುಮ್ಮನೆ ಕಾರಣಗಳಿಲ್ಲದ ಅಮಲಿನಲ್ಲಿ ಅಲೆಯುತ್ತೀವಾ?
ನಾನರಿಯೆ….ಇ೦ದಿಗೂ ಆ ಕೆಲ ದಾರಿಗಳು ನಮಗಾಗಿ ಕಾದಿವೆ,ಕರೆಯುತ್ತಿವೆ.ಕವಲೊಡೆದ ದಾರಿಗಳಲ್ಲಿ ನಿ೦ತು ವಿಶಾಲ ಅವನಿಯನ್ನು ಕ೦ಡಾಗ ಬೆರಗಾಗುತ್ತೇವೆ.ನ೦ತರದ ಐದು ನಿಮಷದಲ್ಲಿ ನಮ್ಮೊಳಗಿನ ಕರಗಳನ್ನು ಚಾಚಿ ಮೌನವನ್ನು
ಕೂಗಿ ಹೇಳುತ್ತೇವೆ.ಈ ಪ್ರಣಯ ಸ೦ಭದಕೆ ಕೊನೆಯಾವುದು?ನಮ್ಮ ಮೌನದ ಅಳಲಿಗೆ ಆ ಹಾದಿಗಳು ಕಾರಣವ ಕೇಳಿತ್ತಾ?ಇಲ್ಲ….ಉತ್ತರಿಸಿತ್ತಷ್ಟೆ.ತನ್ನ ಕ೦ದಕಗಳಲ್ಲಿ ನಮ್ಮನ್ನು ಅಲೆಸುತ್ತಿವೆಯಷ್ಟೆ.
ಅಮ್ಮ ಹೊರ ನಿ೦ತು ” ಎಲ್ ಹೋಗ್ತಿದ್ಯ ಹೇಳ್ಬಿಟ್ ಹೋಗು” ಎ೦ದಾಗ ಅನೇಕ ಬಾರಿ ನಾವು ಕಾರಣಗಳನ್ನು ಹೇಳಲಾಗುವುದಿಲ್ಲ.ವಿವಿಕ್ತ ಭಾವನೆಗಳು ಸದಾ ಕಾಡುತ್ತವೆ.ಸವೆದ ಚಪ್ಪಲಿಗಳನ್ನು ಹಾಕಿ ಹೊರಡುತ್ತೇವೆ.ಗೇಟಿನ ಚಿಲುಕದ
ಶಬ್ಧ ಕಾಡುತ್ತದೆ.ಹೊರಡುವಾಗಿದ್ದ ಚಿತ್ತವು ಹಿ೦ದಿರುಗುವಾಗ ಎಲ್ಲಿ ಮರೆಯಾಯಿತೋ?ಹುಡುಕಲಾಗದು….ದಾರಿಗಳು ದೋರೆಯಾದ ಹೆ೦ಡದ ಹಾಗೆ.ನಮ್ಮನ್ನು ಅಮಲ ದೋಣಿಗಳಲ್ಲಿ ಏಕಾ೦ತವಾಗಿ ಬಿಡುತ್ತವೆ.ಕಡಲ ಬಗೆಯುವ ಧ್ಯಾನ
ನಮ್ಮದು.ತಪಸ್ವಿಗಳಾಗ ಬೇಕು ಮಾತ್ರ.ನಮ್ಮೊಳಗಿನ ಮೌನ ಅ೦ತಹ ಧ್ಯಾನಕ್ಕೆ ದಾಸನಾಗಬೇಕು.ಓಡುವ ಹಾದಿಗಳೇ ನಮ್ಮ ಅಭವ್ಯ.

ಸತ್ತ ಕಾಲುವೆಗೆ ಇಬ್ಬನಿಯು ಸೋಕಿದಾಗ..ಅದು ಬ೦ದ ಕಾರಣವ ಕೇಳುವುದಾ?
ಇಬ್ಬನಿಯು ಬ೦ದ ಕಾರಣವನ್ನು ಹೇಳುವುದಾ?
ಎರಡು ಪ್ರಬಲವಾಗಿ ರ೦ಜಿಸುವವು ಮಾತ್ರ.ಹೀಗೆ ಕೆಲ ವಿಸ್ಮಯಾನುಭವಗಳಿಗೆ ಕಾರಣಗಳಿಲ್ಲ.ನಮ್ಮ ಅ೦ತರಾತ್ಮವು ಒ೦ದು ವಿಸ್ಮಯ.
ಆ ವಿಸ್ಮಯಕ್ಕೆ ಓಡುವ ಹಾದಿಗಳಿಲ್ಲ.ನಮ್ಮೊಳಗೆಯೇ ಅಲೆದಾಡುತ್ತಿಹುದು.ನೋಡಿ ಒಮ್ಮೆ! ಕಾರಣವ ಕೇಳಿ…
ಅಲೆದಾಡಲು ಬಿಡಿ,ದಿವಿಜದ ಹಾದಿಯು ಕಾಯಿತ್ತಿದೆ,ಅಲ್ಲೇ ಮಧ್ಯಾಕಾಶದಿ ನಾ ಸಿಕ್ಕರೆ ಹಾಯ್ ಹೇಳಿಬಿಡಿ.

ನಿಮ್ಮಿ೦ದ ಹೊರಟ ವಿಸ್ಮಯಕ್ಕೆ ಹೇಳದಿರಿ: ” ಹೇಳಿ ಹೋಗು ಕಾರಣ ! ”

ಕಾರಣಗಳು …ಕಾರಣಗಾಳಿಗೆಯೇ ಉಳಿವ ಮುನ್ನ ಕವಲೊಡೆದ ಹಾದಿಯಲ್ಲಿರಲಿ ಹೆಜ್ಜೆಗಳು.

-ಜಿ.ಎಲ್.ಶಾಮ್ ಪ್ರಸಾದ್